ಮಹೇಂದ್ರ ವಿಕ್ರಮವರ್ಮ 
7ನೆಯ ಶತಮಾನ. ಸಂಸ್ಕøತ ಪ್ರಹಸನಕಾರ ಮತ್ತು ವಿಲಾಸ ಪ್ರಹಸನದ ಕರ್ತೃ. ಸಂಸ್ಕøತದ ಪ್ರಹಸನಕಾರರ ವಿರಲ ಪಂಕ್ತಿಯಲ್ಲಿ ಈತನಿಗೆ ಉಚ್ಚಸ್ಥಾನವಿದೆ. ಈತ ಕಂಚಿಯ ರಾಜ. ಪಲ್ಲವ ವಂಶದವ. ಕರ್ನಾಟಕದ ಎರಡನೆಯ ಪುಲಕೇಶಿಯ ಸಮಕಾಲೀನ. ಗುಣಭಾರ, ಶತ್ರುಮಲ್ಲ: ಅವನಿಭಾಜನ ಇತ್ಯಾದಿ ಈತನ ಬಿರುದುಗಳು. ಅನೇಕ ಶಾಸನಗಳಲ್ಲಿ ಈತನ ಉಲ್ಲೇಖವಿರುವಂತೆ ಮತ್ತವಿಲಾಸ ಪ್ರಹಸನದಲ್ಲಿಯೂ ಸ್ಪಷ್ಟವಾಗಿ ಕರ್ತೃವಿನ ಹೆಸರು ಬಿರುದುಗಳು ನಿರ್ದಿಷ್ಟವಾಗಿವೆ.
ಹೆಸರಿಗೆ ಅನ್ವರ್ಥಕವಾಗಿ ಈ ಪ್ರಹಸನದ ವಸ್ತು ಕುಡಿದವರ ವಿಕಟ ವರ್ತನೆ. ಅಷ್ಟು ನಯವಲ್ಲದ ಹಾಸ್ಯ ಇದರ ಮುಖ್ಯ ರಸ. ಬೌದ್ಧ, ಕಾಪಾಲಿಕ, ಪಾಶುಪತ ಸಂನ್ಯಾಸಿಗಳೆಲ್ಲರೂ ಇಲ್ಲಿ ವಿಡಂಬನೆಗೆ ಗುರಿಯಾಗುತ್ತಾರೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಅಂಧಾಚಾರಗಳಿಗೆ ಇಲ್ಲಿ ಭೂತಗನ್ನಡಿ ಹಿಡಿದಂತಿದೆ. ಎಲ್ಲರೂ ಕುಡಿತ ಅಮಲಿನಲ್ಲಿ ಪರಸ್ಪರ ಬೈದಾಡುತ್ತ ನಗೆಗೀಡಾಗುತ್ತಾರೆ. ಇರುವ ಕಥಾಭಾಗ ಬಹಳ ಸ್ವಲ್ಪ ದೇವಸೋಮೆಯೆಂಬ ಕಾಪಾಲಿಕಿಯೊಡನೆ ಕಾಪಾಲಿಕ ಹೆಂಡದ ಅಮಲಿನಲ್ಲಿ ಕಳೆದುಹೋದ ತನ್ನ ಬುರುಡೆಯನ್ನು ಹುಡುಕುತ್ತ ಬರುತ್ತಾನೆ. ನಾಯಿ ಅದನ್ನು ಕಚ್ಚಿಕೊಂಡು ಹೋಗಿರುತ್ತದೆ. ಆದರೆ ಎದುರಿಗೆ ಬರುತ್ತಿರುವ ಬೌದ್ಧ ಭಿಕ್ಷುವೇ ಕದ್ದಿರಬೇಕೆಂದುಕೊಂಡು ಅವನೊಡನೆ ಜಗಳವಾಡುತ್ತಾನೆ. ನ್ಯಾಯವನ್ನು ತೀರಿಸಲು ಪಾಶುಪತನೊಬ್ಬನ ಬಳಿಗೆ ಬರುತ್ತಾರೆ. ನಾಯಿಯ ಬಾಯಿಂದ ಹುಚ್ಚನ ಕೈಸೇರಿದ್ದ ಬುರುಡೆ ಕಡೆಗೊಮ್ಮೆ ಸಿಕ್ಕುತ್ತದೆ.

ಈ ಪ್ರಹಸನದಲ್ಲಿ ಕಥೆಗೆ ಮಹತ್ತ್ವವಿಲ್ಲ. ಘಟನೆಗಳು ಮೇಲ್ನೋಟಕ್ಕೆ ಬಲು ಕ್ಷುದ್ರ. ಆದರೆ ಅವು ವ್ಯಂಗ್ಯಗರ್ಭವಾಗಿವೆ. ಪ್ರಹಸನಕಾರ ಯಾವುದೇ ಒಂದು ಧರ್ಮವನ್ನು ಹಾಸ್ಯಮಾಡಬೇಕೆಂದೂ ಹೊರಟಂತಿಲ್ಲ. ಪ್ರಚಲಿತವಿದ್ದ ಎಲ್ಲ ಸಂಪ್ರದಾಯಗಳಲ್ಲಿಯೂ ಹೀನಾಚಾರಗಳನ್ನು ಮಾತ್ರ ಬಯಲಿಗೆಳೆಯಲು ಸನ್ನಿವೇಶವನ್ನು ರಚಿಸಿಕೊಂಡಂತಿದೆ. ಈತನ ಶೈಲಿ ಸರಳವಾಗಿಯೂ ಹಾಸ್ಯ ಹರಿತವಾಗಿಯೂ ಇದೆ.

ಭಾಸಕೃತವೆಂದು ಹೇಳಲಾಗುವ ನಾಟಕಗಳಲ್ಲಿರುವ ಕೆಲವೊಂದು ಲಕ್ಷಣಗಳು- ಪ್ರಸ್ತಾವನೆ 'ನಾಂದ್ಯಂತೇ ತತಃ ಸೂತ್ರದಾರಃ' ಎಂದು ಮೊದಲಾಗಿ 'ಇತಿಸ್ಥಾಪನಾ ಎಂದು ಮುಗಿಯುವುದು ಇತ್ಯಾದಿ-ಈ ಪ್ರಹಸನದಲ್ಲಿಯೂ ಕಾಣುತ್ತವೆಯಾಗಿ ಭಾಸ ಸಮಸ್ಯೆಯ ಚರ್ಚೆಯಲ್ಲಿ ಕುತೂಹಲಿಗಳಾಗಿದ್ದ ವಿದ್ವಾಂಸರ ಗಮನವನ್ನು ಈ ಪ್ರಸಹನ ವಿಶೇಷವಾಗಿ ಸೆಳೆಯಿತು. ಸಂಸ್ಕøತ ಪ್ರಹಸನಗಳಲ್ಲಿ ಮತ್ತು ವಿಲಾಸಕ್ಕೆ ಅಗ್ರಸ್ಥಾನ ಸಲ್ಲುತ್ತದೆ. 	 
 (ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ